ಕಾರ್ಮೈಕೇಲ್, ಗ್ರೇಸ್ ಎಲಿಜûಬೆತ್ ಜೆನ್ನಿಂಗ್ಸ್

 1867-1904. ಆಸ್ಟ್ರೇಲಿಯದ ವಿಕ್ಟೋರಿಯ ಪ್ರಾಂತ್ಯದ ಮೊದಲ ಕವಯಿತ್ರಿ. ಜೆ. ಸಿ. ಎಂಬ ಸಂಕ್ಷಿಪ್ತಾಭಿಧಾನದಿಂದ ಪ್ರಸಿದ್ಧಳಾಗಿದ್ದಾಳೆ. ಹುಟ್ಟಿದ್ದು ಬಲ್ಲಾರಟ್‍ನಲ್ಲಿ. ಮೆಲ್ಬೋರ್ನ್‍ನಲ್ಲಿ ಶಿಕ್ಷಣ ಪಡೆದರೂ ಗ್ರಾಮಾಂತರ ಪ್ರದೇಶದಲ್ಲಿ ಬೆಳೆದ ಈಕೆ ಸ್ವಾಭಾವಿಕವಾಗಿಯೇ ಅಲ್ಲಿಯ ಜೀವನದಲ್ಲಿ ಆಸಕ್ತಿ ವಹಿಸಿದ್ದಳು.

 1888ರಲ್ಲಿ ಮೆಲ್ಬೋರ್ನ್ ಮಕ್ಕಳ ಆಸ್ಪತ್ರೆಯಲ್ಲಿ ದಾದಿಯ ತರಬೇತಿಗಾಗಿ ಸೇರಿದ ಈಕೆ ಆ ಅನುಭವಗಳ ಚಿತ್ರವನ್ನು ಹಾಸ್ಪಿಟಲ್ ಚಿಲ್ಡ್ರನ್ (1891) ಎಂಬ ಗ್ರಂಥದಲ್ಲಿ ಕೊಟ್ಟಿದ್ದಾಳೆ. ಗೀಲ್‍ಂಗ್‍ನಲ್ಲಿ ಕೆಲಸಕ್ಕೆ ಸೇರಿದ ಈಕೆ ಅಲ್ಲಿಯೇ ಫ್ರಾನ್ಸಿಸ್ ಮುಲ್ಲರ್‍ನನ್ನು ವಿವಾಹವಾದಳು. ಆಸ್ಟ್ರಲೇಸಿಯನ್ ಪತ್ರಿಕೆಗೆ ಪದ್ಯಗಳನ್ನು ಬರೆಯುತ್ತಿದ್ದು 1895ರಲ್ಲಿ ಒಂದು ಕವನ ಸಂಕಲನವನ್ನು ಪ್ರಕಟಿಸಿದಳು. ಕೆಲಕಾಲ ದಕ್ಷಿಣ ಆಸ್ಟ್ರೇಲಿಯದಲ್ಲಿದ್ದು ಅನಂತರ ಲಂಡನಿಗೆ ಹೋಗಿ ತನ್ನ 37ನೆಯ ವಯಸ್ಸಿನಲ್ಲಿ ಅಸುನೀಗಿದಳು. ಈಕೆ ಸಾಯುವಾಗ ಬಹು ಬಡತನದಲ್ಲಿದ್ದಳು. ಈಕೆಯ ಅಭಿಮಾನಿಗಳು ಕೆಲವರು ಇವಳ ಮೂರು ಮಕ್ಕಳನ್ನು ಆಸ್ಟ್ರೇಲಿಯಕ್ಕೆ ಕರೆತಂದರು. ವಿಕ್ಟೋರಿಯ ಪ್ರಾಂತ್ಯದ ಮೊದಲ ಕವಯಿತ್ರಿಗಾಗಿ ಜನಮೆಚ್ಚುವಂತೆ ಪದ್ಯಗಳನ್ನು ಬರೆದ ಈಕೆಯ ನೆನಪಿಗಾಗಿ ಜನ್ಮಸ್ಥಳವಾದ ಬಲ್ಲಾರಟ್ ಹಾಗೂ ವಾಸಸ್ಧಳವಾದ ಆರ್ಬೋರ್ಟ್ ಪ್ರದೇಶಗಳಲ್ಲಿ ಫಲಕಗಳನ್ನು ಸ್ಥಾಪಿಸಲಾಗಿದೆ. ಲಂಡನ್ನಿನಲ್ಲಿ ಈಕೆಯ ಗೋರಿಯ ಮೇಲಿರುವ ಫಲಕದಲ್ಲಿ ಅಕೇಸಿಯ ಮರದ ಕೊಂಬೆಯ ಚಿತ್ರ ಹಾಗೂ ಆಕೆಯ ಪದ್ಯವೊಂದರ ಸಾಲುಗಳನ್ನು ಕೆತ್ತಲಾಗಿದೆ.    

 

 (ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 